ದಂಡನಶಾಸ್ತ್ರ-
ದಂಡನೆಯ ಪರಿಕಲ್ಪನೆಯ ಚರಿತ್ರೆ ಹಾಗೂ ಮನಶ್ಯಾಸ್ತ್ರ ರೀತ್ಯ ಅದರಲ್ಲಿ ಆಗಿರುವ ಬದಲಾವಣೆಗಳನ್ನು ಇಲ್ಲಿ ಗುರುತಿಸಿದೆ. ದಂಡನ ಶಾಸ್ತ್ರದ ಗುರಿಯಾಗಿರುವ ಶಿಕ್ಷೆಯ ವೈಜ್ಞಾನಿಕ ಅಧ್ಯಯನ ತೌಲನಿಕವಾಗಿ ಈಚಿನದು. ಅಪರಾಧ ಶಾಸ್ತ್ರದ ವಿಕಾಸದೊಂದಿಗೆ ಇದು ಗಂಭೀರವಾದ ಪರಿಶೋಧನೆಯ ಕ್ಷೇತ್ರವಾಗಿ ಪರಿಣಮಿಸಿತು. ಅಪರಾಧಿಯ ಸ್ವರೂಪ ಮತ್ತು ಲಕ್ಷಣಗಳು ಹಾಗೂ ಅಪರಾಧದ ವಿದ್ಯಮಾನದ ಬಗೆಗಿನ ಶೋಧನೆಯ ಜೊತೆಯಲ್ಲಿಯೇ ಇದಕ್ಕೆ ಸಂಬಂಧಪಟ್ಟ ವಿದ್ಯಮಾನವಾದ ದಂಡನೆ ಅಥವಾ ಶಿಕ್ಷೆಯ ಬಗೆಗೂ ಕಾಳಜಿ ಮೂಡಿತು.

ಅಪರಾಧದ ಬಗೆಗಿನ ದಂಡನಾತ್ಮಕ ಪ್ರತಿಕ್ರಿಯೆ - ಅಂದರೆ, ತಪ್ಪನ್ನು ತಿದ್ದುವ ಕ್ರಮವಾಗಿ ಉದ್ದೇಶಪೂರ್ಣವಾಗಿ ಅಪರಾಧಿಗೆ ನೋವನ್ನು ಉಂಟುಮಾಡುವುದು- ಈಚಿನ ವರೆಗೆ ಬಹುಮಟ್ಟಿಗೆ ರೂಪುದಳೆದಿರಲಿಲ್ಲ. ಅನಕ್ಷರಸ್ಥ ಸಮಾಜಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸುತ್ತಿರಲಿಲ್ಲ. ಉದಾಹರಣೆಗೆ ಅಂಡಮಾನ್ ದ್ವೀಪ ನಿವಾಸಿಗಳಲ್ಲಿ ವ್ಯಕ್ತಿಯೊಬ್ಬ ಇನ್ನೊಬ್ಬನಿಗೆ ನೋವನ್ನುಂಟುಮಾಡಿದರೆ ಹೀಗೆ ನೊಂದ ವ್ಯಕ್ತಿ ತನಗೆ ಇಚ್ಛೆಯಿದ್ದಲ್ಲಿ ಮಾತ್ರ, ಸೇಡುತೀರಿಸಿಕೊಳ್ಳುತ್ತಿದ್ದ. ಸಮೂಹ ಇದರ ಬಗ್ಗೆ ಆಸಕ್ತಿವಹಿಸುತ್ತಿರಲಿಲ್ಲ. ಸಮಾಜ ವ್ಯಕ್ತಿಯ ಬಗ್ಗೆ ಇರಿಸಿಕೊಂಡಿದ್ದಂಥ ಗೌರವ ಇಲ್ಲವಾಗುತ್ತಿತ್ತು ಎಂಬುದೊಂದೇ ಅಪರಾಧಿಯ ದೃಷ್ಟಿಯಿಂದ ನೋವನ್ನುಂಟುಮಾಡುವಂಥ ಪರಿಣಾಮವಾಗುತ್ತಿತ್ತು. ಇದೇ ರೀತಿ ಅಮೆರಿಕನ್ ಇಂಡಿಯನ್ನರಲ್ಲಿಯೂ ಈಗ ಅರ್ಥಮಾಡಿಕೊಳ್ಳಲಾಗುತ್ತಿರುವ ದೃಷ್ಟಿಯಲ್ಲಿ ತಪ್ಪು ವರ್ತನೆಗಳಿಗೆ ದಂಡನೆ ಅಥವಾ ಶಿಕ್ಷೆ ಎಂಬುದು ಇರಲೇ ಇಲ್ಲವೆಂಬುದನ್ನು ಈ ಸಂಬಂಧವಾದ ಅಧ್ಯಯನಗಳು ಸ್ಪಷ್ಟಪಡಿಸಿವೆ.

ತಪ್ಪನ್ನು ತಿದ್ದುವ ಹಾಗೂ ಕಾನೂನು ಮತ್ತು ಶಿಸ್ತನ್ನು ಜಾರಿಗೆ ಕೊಡುವ ಕ್ರಮವಾಗಿ ತಪ್ಪಿಗೆ ದಂಡನೆಯನ್ನು ವಿಧಿಸುವ ವಿಧಾನ ಮೊದಲಾದದ್ದು ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದು ಸಾರ್ವಜನಿಕ ವಿಚಾರವೆಂಬ ಆಲೋಚನೆಯ ಪರಿಣಾಮವಾಗಿಯೇ. ಇದರ ಪರಿಣಾಮವಾಗಿ ಕೇಂದ್ರ ಅಧಿಕಾರ ಹಾಗೂ ನ್ಯಾಯಾಲಯಗಳು ಅಸ್ತಿತ್ವಕ್ಕೆ ಬಂದವು. ಅಪರಾಧದ ಬಗೆಗಿನ ಪ್ರತಿಕ್ರಿಯೆ ಖಾಸಗಿ ವಿಷಯ ವಾಗಿರುವುದಕ್ಕೆ ಬದಲಾಗಿ ಸಾಮೂಹಿಕ ಅಥವಾ ಸಾಮಾಜಿಕ ವಿಷಯವಾಗಿರುವುದರಿಂದ, ಸಮೂಹವೇ ಇದರ ಬಗ್ಗೆ ವ್ಯವಹರಿಸಬೇಕೆಂಬುದು ಇದರ ಅರ್ಥವಾಯಿತು. ಆಗ ಪ್ರತಿಕ್ರಿಯೆ ಎಂಬುದು ನಾವು ಇಂದು ಅರ್ಥ ಮಾಡಿಕೊಳ್ಳುವ ದೃಷ್ಟಿಯಲ್ಲಿ, ದಂಡನೆ - ಅಂದರೆ ದೈಹಿಕವಾಗಿ ನೋವನ್ನುಂಟುಮಾಡುವುದು - ಎಂಬುದಕ್ಕೆ ಹತ್ತಿರ ಹತ್ತಿರ ಬಂತು. ಆದರೆ, ತಪ್ಪನ್ನು ತಿದ್ದುವ ಅಥವಾ ಸುಧಾರಕ ಮೌಲ್ಯವಿದೆ ಎಂಬ ಕಲ್ಪನೆ ಮಧ್ಯಯುಗದಲ್ಲಿಯೂ ಬಹುಮಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇತಿಹಾಸದಲ್ಲಿ ಆಧುನಿಕಯುಗ ಮೊದಲಿಟ್ಟಂದಿನಿಂದ ಸಮೂಹ ಅಪರಾಧಿಗೆ ಶಿಕ್ಷೆಯನ್ನು ವಿಧಿಸಬೇಕು ಹಾಗೂ ಅದಕ್ಕೆ ಒಂದು ಸುಧಾರಕ ಮೌಲ್ಯವಿದೆ ಎಂಬ ಭಾವನೆ ಬೆಳೆಯುತ್ತ ಬಂತು.

ಕಾಲಾನುಕ್ರಮದಲ್ಲಿ ದಂಡನಶಾಸ್ತ್ರದ ಮೂರು ಪಂಥಗಳು - ಅಭಿಜಾತ, ನವಅಭಿಜಾತ ಮತ್ತು ಇತ್ಯಾತ್ಮಕ ಪಂಥಗಳು-ಅಸ್ತಿತ್ವಕ್ಕೆ ಬಂದವು. ಇವುಗಳಲ್ಲಿ ಒಂದೊಂದು ಅಪರಾಧದ ಬಗೆಗಿನ ಸಾಮಾಜಿಕ ಪ್ರತಿಕ್ರಿಯೆಯಲ್ಲಿ ಆದ ಬದಲಾವಣೆಯನ್ನು ಸೂಚಿಸುತ್ತವೆ. ಅಭಿಜಾತಪಂಥ 18ನೆಯ ಶತಮಾನದಲ್ಲಿ ಉತ್ತರಾರ್ಧದಲ್ಲಿ ಜನ್ಮ ತಾಳಿತು. ಇಟಲಿಯ ನ್ಯಾಯಶಾಸ್ತ್ರಜ್ಞನಾದ ಸೆಸೇರ್ ಬೆಕಾರಿಯಾ ಇದರ ಮುಖ್ಯ ಪ್ರತಿಪಾದಕನಾಗಿದ್ದ. ಮಾನವ ಸ್ವತಂತ್ರ ವ್ಯಕ್ತಿಯೆಂದೂ ಆನಂದ ಮತ್ತು ನೋವಿನಪರಿಗಣನೆಗಳ ಆಧಾರದ ಮೇಲೆ ತನ್ನ ವರ್ತನೆಯನ್ನು ನಿಯಂತ್ರಿಸಿಕೊಳ್ಳುತ್ತಾನೆಂದೂ ಆತ ಪ್ರತಿಪಾದಿಸಿದ್ದ. ತಾನು ಎಸಗುವ ಕಾರ್ಯಗಳಿಂದ ತನಗೆ ಲಾಭ ಅಥವಾ ಆನಂದ ಲಭ್ಯವಾಗುತ್ತದೆಂಬ ಕಾರಣದಿಂದಲೇ ಅವನು ಅಪರಾಧವನ್ನೆಸಗುತ್ತಾನೆ. ಆದ್ದರಿಂದ, ಅಪರಾಧಕ್ಕೆ ತಕ್ಕಂತೆ ಶಿಕ್ಷೆ ಇದ್ದರೆ ಹಾಗೂ ಇದನ್ನು ಪೂರ್ವಭಾವಿಯಾಗಿಯೇ ನಿರ್ಧರಿಸಿದ್ದು, ಅದು ಎಲ್ಲರಿಗೂ ಗೊತ್ತಿದ್ದರೆ ಭಾವಿ ಅಪರಾಧಿ ಪರಿಣಾಮಗಳನ್ನು ಗಮನಿಸಿ, ಅಪರಾಧವನ್ನೆಸಗುವುದರಿಂದ ಹಿಂದೆಗೆಯಬಹುದು. ಇತ್ತ ಅಪರಾಧವನ್ನೆಸಗಿದ ವ್ಯಕ್ತಿಗೆ ತಕ್ಕ ಶಿಕ್ಷೆ ದೊರೆಯುತ್ತದೆ ಹಾಗೂ ಅಪರಾಧವನ್ನೆಸಗುವುದರಿಂದ ಪ್ರಯೋಜನವೇನೂ ಇಲ್ಲವೆಂಬ ಭವಿಷ್ಯದ ಪಾಠವನ್ನು ಕಲಿಯಲೂಬಹುದು. ಅಷ್ಟೇ ಅಲ್ಲ, ಈ ಸಿದ್ಧಾಂತಕ್ಕನುಗುಣವಾಗಿ ನಿರ್ದಿಷ್ಟ ಕಾನೂನು ಅಥವಾ ನಿಯಮವೊಂದನ್ನು ಉಲ್ಲಂಘಿಸುವ ಎಲ್ಲ ವ್ಯಕ್ತಿಗಳಿಗೂ ವಯಸ್ಸು, ಮನಸ್ವಾಸ್ಥ್ಯ, ಶ್ರೀಮಂತಿಕೆ, ಸ್ಥಾನಮಾನ ಅಥವಾ ಸನ್ನಿವೇಶಗಳ ಯಾವೊಂದು ಪರಿಗಣನೆಯೂ ಇಲ್ಲದೇ ಒಂದೇ ಬಗೆಯ ಶಿಕ್ಷೆಯನ್ನು ವಿಧಿಸಬೇಕು. ಎಲ್ಲ ವ್ಯಕ್ತಿಗಳನ್ನೂ ಒಂದೇ ರೀತಿಯಾಗಿ ಪರಿಭಾವಿಸುವುದರ ಮೂಲಕವೇ ವ್ಯಕ್ತಿಗಳ ಅಧಿಕಾರ ಅಥವಾ ಹಕ್ಕುಗಳನ್ನು ಅತ್ಯುತ್ತಮ ರೀತಿಯಲ್ಲಿ ಕಾಪಾಡಬಹುದೆಂಬ ವಾದದ ಆಧಾರದ ಮೇಲೆ ಇವನ್ನು ಸಮರ್ಥಿಸಲಾಗಿದೆ. 
ದಂಡನೆಯ ಈ ಸಿದ್ಧಾಂತದ ಮುಖ್ಯ ಅಂಶಗಳನ್ನು ಬಹುಮಟ್ಟಿಗೆ ಎಲ್ಲ ನಾಗರಿಕ ಸಮಾಜಗಳಲ್ಲಿಯೂ ಅಂಗೀಕರಿಸಲಾಗಿತ್ತು; ಇವು ಅವುಗಳ ನ್ಯಾಯಾಂಗ ವ್ಯವಸ್ಥೆಗೆ ಆಧಾರವೂ ಆಗಿದ್ದವು. ಆದರೆ, ಬಹುಬೇಗ ಇದನ್ನು ಬದಲಾಯಿಸಲಾಯಿತು. ಮಕ್ಕಳು ಮತ್ತು ಮಾನಸಿಕ ಸ್ವಾಸ್ಥ್ಯ ಇಲ್ಲದಿರುವಂಥ ವ್ಯಕ್ತಿಗಳು ಬೌದ್ಧಿಕವಾಗಿ ಆನಂದ ಮತ್ತು ನೋವನ್ನು ಪರಿಭಾವಿಸಲಾರರೆಂಬ ಆಧಾರದ ಮೇಲೆ ಅವರಿಗೆ ವಿನಾಯಿತಿಯನ್ನು ಕಲ್ಪಿಸುವ ಸಲುವಾಗಿ ಹೀಗೆ ಮಾಡಲಾಯಿತು. ಸ್ವಲ್ಪ ಮಟ್ಟಿನ ನ್ಯಾಯಾಂಗೀಯ ವಿವೇಚನೆ ಸಾಧ್ಯವಾಗುವಂತೆ, ಇವರುಗಳ ಬಗ್ಗೆ ವಿಧಿಸಲಾದ ದಂಡನೆಗಳು ಅಷ್ಟೊಂದು ಖಚಿತವಾಗಿರಲಿಲ್ಲ. ಕಾಲಾನುಕ್ರಮದಲ್ಲಿ ಈ ಬದಲಾವಣೆಗಳ ನೆಲೆ ವಿಸ್ತøತವಾಗುತ್ತ ಬಂದು ಉಪಶಮನಾರ್ಹ ಪರಿಸ್ಥಿತಿಗಳು ಮತ್ತು ಇತರ ಪರಿಗಣನೆಗಳನ್ನು ಒಳಗೊಳ್ಳುವಂತಾಯಿತು. ಇದು ದಂಡನ ಶಾಸ್ತ್ರದ ನವ-ಅಭಿಜಾತ ಪಂಥಕ್ಕೆ ಕಾರಣವಾಯಿತು.

ಇಟಲಿಯ ಅಪರಾಧ ಶಾಸ್ತ್ರಜ್ಞನಾದ ಸಸೇರ್ ಲೊಂಬ್ರೋಸೋ ಪ್ರತಿಪಾದಿಸಿದ ಇತ್ಯಾತ್ಮಕ ವೈಯಕ್ತಿಕ ಹೊಣೆಗಾರಿಕೆಯನ್ನು ನಿರಾಕರಿಸುತ್ತದೆ. ಆದ್ದರಿಂದ, ಅದು ದಂಡನೆಯ ಅಪೇಕ್ಷಣೀಯತೆಯನ್ನು ಅಥವಾ ಅದರ ಪರಿಣಾಮಗಳನ್ನು ಪ್ರಶ್ನಿಸುತ್ತದೆ. ಬೇರಾವುದೇ ಬಗೆಯ ವರ್ತನೆಯಂತೆ ಅಪರಾಧವರ್ತನೆಯೂ ನೈಸರ್ಗಿಕವಾದ ಅಥವಾ ಸ್ವಾಭಾವಿಕವಾದ ಒಂದು ವಿದ್ಯಮಾನ. ಹೀಗಾಗಿ ಅಪರಾಧ ಕೃತ್ಯಗಳಿಗಾಗಿ ವ್ಯಕ್ತಿಯೊಬ್ಬನನ್ನು ದಂಡಿಸುವುದರಿಂದ ಯಾವೊಂದು ವಾಸ್ತವಿಕ ಉದ್ದೇಶವೂ ಈಡೇರುವುದಿಲ್ಲ ಎಂಬುದು ಈ ಪಂಥದ ವಾದ. ಆತ್ಮರಕ್ಷಣೆಯ ಅಂಗವಾಗಿ ಅಪರಾಧಿಯ ಬಗ್ಗೆ ಸಮಾಜ ಯಾವುದಾದರೂ ಒಂದು ಕ್ರಮವನ್ನು ಕೈಗೊಳ್ಳಲೇಬೇಕು ಎಂಬುದನ್ನು ಅದು ಒಪ್ಪುತ್ತದೆ. ಆದರೆ ಸಾಧ್ಯವಿದ್ದಲ್ಲಿ ಸುಧಾರಣೆಯ ಮೂಲಕ ಅಥವಾ ಪ್ರತ್ಯೇಕಿಸುವುದರ ಮೂಲಕ ಹಾಗೂ ಅತ್ಯಂತ ಗಂಭೀರ ಸಂದರ್ಭಗಳಲ್ಲಿ ಮರಣ ದಂಡನೆ ವಿಧಿಸುವುದರ ಮೂಲಕ ಇಂಥ ರಕ್ಷಣೆಯನ್ನು ಸಾಧಿಸಬಹುದು. ಆದರೆ, ಇದನ್ನು ದಂಡನೆ ಅಥವಾ ಶಿಕ್ಷೆ ಎಂದು ಭಾವಿಸಬಾರದು. 

ಬೇರೆ ಬೇರೆ ದೇಶಗಳು ಈ ಮೂರು ಪಂಥಗಳಲ್ಲಿ ಒಂದಿಲ್ಲೊಂದು ಪಂಥದ ಸಿದ್ಧಾಂತಗಳನ್ನು ಒತ್ತಿ ಹೇಳುವಂತೆ ತೋರಿದರೂ ಎಲ್ಲ ನಾಗರಿಕ ಸಮಾಜಗಳಲ್ಲಿ ಪ್ರಚಲಿತವಾಗಿರುವ ಸದ್ಯದ ದಂಡನ ಕ್ರಮಗಳು ಈ ಮೂರು ದಂಡಶಾಸ್ತ್ರ ಪಂಥಗಳ ಸಿದ್ಧಾಂತಗಳನ್ನೇ ಆಧಾರವಾಗಿರಿಸಿಕೊಂಡಿವೆಯೆಂದು ಹೇಳಬಹುದಾಗಿದೆ. ಕಡಿಮೆ ಪ್ರಮಾಣದಲ್ಲಿ ಹಾಗೂ ಮೃದುತರ ಸ್ವರೂಪದಲ್ಲಿ ದಂಡನ ಕ್ರಮಗಳನ್ನು ಇಂದಿಗೂ ಅನುಸರಿಸಲಾಗುತ್ತಿದೆಯಾದರೂ ಒಟ್ಟಿನಲ್ಲಿ ದಂಡನ ಪ್ರವೃತ್ತಿ ಸುಧಾರಣಾವಾದದ ದಿಕ್ಕಿನಲ್ಲಿಯೇ ಹರಿಯುತ್ತಿದೆ. 

ಕಾಲಕಾಲಕ್ಕೆ ಹಾಗೂ ಸಮಾಜದಿಂದ ಸಮಾಜಕ್ಕೆ ಶಿಕ್ಷೆಯನ್ನು ವಿಧಿಸುವ ವಿಧಾನ ಅಥವಾ ತಂತ್ರಗಳು ಬೇರೆಯಾಗುತ್ತ ಬಂದಿವೆ. ಬೇರೆ ಬೇರೆ ರಾಷ್ಟ್ರಗಳಲ್ಲಿನ ದಂಡನಾತ್ಮಕ ಪ್ರತಿಕ್ರಿಯೆಯ ಇತಿಹಾಸವನ್ನು ಪರೀಕ್ಷಿಸಿದರೆ ನಾಲ್ಕು ಮುಖ್ಯವಿಧಾನಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. 1. ಸಾವು, ದೇಶೋಚ್ಛಾಟನೆಯ ಮೂಲಕ ಅಥವಾ ಈಚಿನ ದಿನಗಳಲ್ಲಿ ಮಾಡುವಂತೆ. ಸೆರೆವಾಸದ ಮೂಲಕ ವ್ಯಕ್ತಿಯನ್ನು ಬೇರ್ಪಡಿಸುವುದು. 2. ದೈಹಿಕವಾಗಿ ಹಿಂಸೆ ನೀಡುವುದು. 3. ಸಾಮಾಜಿಕವಾಗಿ ಪದಾವನತಿಗೊಳಿಸುವುದು; ಮತ್ತು 4. ಆರ್ಥಿಕವಾಗಿ ನಷ್ಟವನ್ನುಂಟುಮಾಡುವುದು. ಬೇರೆ ಬೇರೆ ಸಮಾಜಗಳಲ್ಲಿ ಬೇರೆ ಬೇರೆ ರೂಪುಗಳಲ್ಲಿ ಈ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಮೇಲಾಗಿ, ಒಂದಲ್ಲ ಒಂದು ವಿಧಾನವನ್ನು ಒತ್ತಿ ಹೇಳಿದರೂ ಯಾವುದೇ ಒಂದು ವಿಧಾನವನ್ನು ಅಳವಡಿಸಿಕೊಳ್ಳುವುದಕ್ಕೆ ಬದಲಾಗಿ ಎಲ್ಲ ವಿಧಾನಗಳನ್ನು ಬಳಸಲಾಗಿದೆ ಹಾಗೂ ಇಂದಿಗೂ ಬಳಸಲಾಗುತ್ತಿದೆ. ಹೀಗಾಗಿ, ಇಂದು ಅಮೆರಿಕಸಂಯುಕ್ತ ಸಂಸ್ಥಾನದಲ್ಲಿ ದಂಡ ವಿಧಿಸುವುದು ಹಾಗೂ ಸೆರೆವಾಸದ ಶಿಕ್ಷೆಯನ್ನು ವಿಧಿಸುವುದು ಮುಖ್ಯ ವಿಧಾನಗಳಾಗಿ ಪರಿಣಮಿಸಿದೆ. 

ಒಂದಲ್ಲ ಒಂದುರೂಪದಲ್ಲಿ ಅಂದರೆ, ಸುಡುವುದು, ಎಣ್ಣೆಯಲ್ಲಿ ಹಾಕಿ ಕುದಿಸುವುದು, ಚಕ್ರಕ್ಕೆ ಕೊಡುವುದು, ನೀರಿನಲ್ಲಿ ಮುಳುಗಿಸುವುದು ಇತ್ಯಾದಿ. ಮರಣದಂಡನೆಯನ್ನು ಎಲ್ಲ ಸಮಾಜಗಳಲ್ಲಿಯೂ ಜಾರಿಗೆ ಕೊಡಲಾಗಿತ್ತು. ಆದರೆ, ಇದು ತುಂಬ ವ್ಯಾಪಕವಾಗಿದ್ದುದು ಮಧ್ಯಯುಗದಯೂರೋಪಿನಲ್ಲಿ. ಮಧ್ಯಯುಗದಲ್ಲಿಯೇ ಮರಣ ದಂಡನಾರ್ಹ ಅಪರಾಧಗಳ ಸಂಖ್ಯೆಯೂ ಅತ್ಯಂತ ಹೆಚ್ಚಾಗಿತ್ತು. ಹದಿನೈದನೆಯ ಶತಮಾನದಿಂದ ಅದು ಒಂದೇ ಸಮನಾಗಿ ಇಳಿಮುಖವಾಗುತ್ತ ಬಂತು. ಇಂಗ್ಲೆಂಡಿನಲ್ಲೇನೋ ಪರಿಸ್ಥಿತಿ ಹೀಗಿರಲಿಲ್ಲವೆಂಬುದು ನಿಜ. ಹದಿನೈದನೆಯ ಶತಮಾನದಲ್ಲಿ ಅಲ್ಲಿಯೂ ಮರಣದಂಡನಾರ್ಹ ಅಪರಾಧಗಳ ಸಂಖ್ಯೆ 17 ಆಗಿದ್ದರೆ, 1780 ರಲ್ಲಿ ಈ ಸಂಖ್ಯೆ ಸುಮಾರು 350 ಆಗಿತ್ತು; 1839ರ ಹೊತ್ತಿಗೆ ಈ ಸಂಖ್ಯೆ ಸ್ವಲ್ಪ ಕಡಿಮೆಯಾಯಿತು. ಅಂದರೆ, ಸರಿಸುಮಾರಾಗಿ ಹಿಂದಿನ ನಾಲ್ಕು ಶತಮಾನಗಳಲ್ಲಿ ಇದ್ದಷ್ಟು ಆಗಿತ್ತು. ಮೇಲಾಗಿ, ಇಂಗ್ಲೆಂಡಿನಲ್ಲಿ, ಹತ್ತೊಂಬತ್ತನೆಯ ಶತಮಾನದ ಮೊದಲ ದಶಕಗಳ ವರೆಗೆ, ಅತ್ಯಂತಕ್ರೂರ ವಿಧಾನದಲ್ಲಿ ಮರಣ ದಂಡನೆಯನ್ನು ವಿಧಿಸಲಾಗುತ್ತಿತ್ತು. ಉದಾಹರಣೆಗೆ ದೇಶದ್ರೋಹದ ಆಪಾದನೆಯ ಮೇಲೆ ನೇಣು ಹಾಕುವುದು, ಜೀವಂತವಾಗಿರುವಾಗಲೇ ಸೀಳಿ ಹಾಕುವುದು, ಕರುಳನ್ನು ಕಿತ್ತು ಹಾಕುವುದು, ತಲೆ ಕತ್ತರಿಸುವುದು, ಶರೀರದ ಭಾಗಗಳನ್ನು ತುಂಡರಿಸುವುದು- ಇವುಗಳಲ್ಲಿ ಸೇರಿದ್ದುವು.

ಈಚೆಗೆ ನಾಗರಿಕ ಪ್ರಪಂಚಾದ್ಯಂತ ಮರಣದಂಡನಾರ್ಹ ಅಪರಾಧಗಳ ಸಂಖ್ಯೆ ಬಹುವಾಗಿ ಇಳಿದಿರುವುದೇ ಅಲ್ಲದೇ, ಮರಣ ದಂಡನಾರ್ಹ ಶಿಕ್ಷೆಯನ್ನು ವಿಧಿಸುವುದು ಹೆಚ್ಚು ಹೆಚ್ಚು ಅಪೂರ್ವವಾಗುತ್ತ ಬರುತ್ತಿದೆ. ಎಲ್ಲಿ ಅದು ಸಂಪೂರ್ಣವಾಗಿ ಮಾಯವಾಗಿಲ್ಲವೋ ಅಲ್ಲಿ ಅದನ್ನು ಚಾಟಿ ಏಟಿನ ಶಿಕ್ಷೆಯ ರೂಪದಲ್ಲಿ ಉಳಿಸಿಕೊಳ್ಳಲಾಗಿದೆ. ಇಂಗ್ಲೆಂಡಿನಲ್ಲಿ ಇದು ಕೆಲವೊಂದು ಬಗೆಯ ವಯಸ್ಕ ಅಪರಾಧಗಳಿಗೆ ಹಾಗೂ ಬಾಲಾಪರಾಧಿಗಳಿಗೆ ವಿಧಿಸುವ ಕಾನೂನುಬದ್ಧ ದಂಡನೆಯಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಎರಡು ರಾಜ್ಯಗಳಲ್ಲಿ ಮಾತ್ರ (ಮೇರೀಲ್ಯಾಂಡ್ ಮತ್ತು ಡೆಲಾವೇರ್) ಅಪರಾಧಿಗಳಿಗೆ ಚಾಟಿ ಏಟಿನ ಶಿಕ್ಷೆಯನ್ನು ವಿಧಿಸುವ ಅಧಿಕಾರವನ್ನು ನೀಡಲಾಗಿದೆ. ಆದರೆ ಅಲ್ಲಿಯೂ ಇದನ್ನು ತುಂಬ ವಿರಳವಾಗಿ ಬಳಸಲಾಗುತ್ತಿದೆ. ಅಂತೆಯೇ ಸಾಮಾಜಿಕ ಪದಾವನತಿಯ ಕ್ರಮವೂ ದಂಡನಾತ್ಮಕ ವಿಧಾನವಾಗಿ ಇಂದೂ ಪ್ರಚಲಿತವಾಗಿದೆ. ಆದರೆ, ಹಿಂದೆ ವಿಧಿಸಲಾಗುತ್ತಿದ್ದ ಇದೇ ಬಗೆಯ ದಂಡನೆಗಳೊಡನೆ ಹೋಲಿಸಿದರೆ ಈಗಿನ ವಿಧಾನಗಳಲ್ಲಿನ ತೀವ್ರತೆ ಕಡಿಮೆಯಾಗಿದೆ. ಸ್ವರೂಪ ಮೃದುತರವಾಗಿದೆ. ಈಗ ಕೆಲವು ರಾಷ್ಟ್ರಗಳಲ್ಲಿ ಕಾಣದೊರೆಯುವ ಸಾಮಾಜಿಕ ಪದಾವನತಿಯ ವಿಧಾನಗಳೆಂದರೆ ಮತದಾನದ ಅಧಿಕಾರವನ್ನು ಕಳೆದುಕೊಳ್ಳುವುದು. ಅಧಿಕಾರ ಸ್ಥಾನದಲ್ಲಿರುವ ಅರ್ಹತೆಯನ್ನು ಕಳೆದುಕೊಳ್ಳುವುದು. ಒಡಂಬಡಿಕೆಗಳನ್ನು ಮಾಡಿಕೊಳ್ಳುವ ಅಧಿಕಾರವನ್ನು ಕಳೆದುಕೊಳ್ಳುವುದು. ಕೆಲವೊಂದು ವೃತ್ತಿಗಳಲ್ಲಿ ತೊಡಗಿದ ಹಕ್ಕನ್ನು ಕಳೆದುಕೊಳ್ಳುವುದು. ವಿದೇಶಕ್ಕೆ ವಲಸೆ ಹೋಗುವ ಅಧಿಕಾರವನ್ನು ಕಳೆದುಕೊಳ್ಳುವುದು - ಇತ್ಯಾದಿ. ಜೊತೆಗೆ, ಬಂಧನ ಶಿಕ್ಷೆ ವಿಧಿಸುವುದು. ಅದರಲ್ಲಿಯೂ ಸೆರೆವಾಸದ ಶಿಕ್ಷೆ - ಇವು ಸ್ವತಃ ಅಗೌರವವನ್ನು ತರುವಂಥ ವಿಚಾರಗಳೇ.

ಒಂದಲ್ಲ ಒಂದು ರೂಪದ ಬಹಿಷ್ಕಾರವನ್ನು ಅನೇಕ ಸಮಾಜಗಳು ಶಿಕ್ಷೆಯರೂಪದಲ್ಲಿ ಬಳಸಿವೆ. ಪ್ರಾಚೀನ ರೋಮ್‍ನಲ್ಲಿ ಕೆಲವೊಂದು ಬಗೆಯ ಅತಿಕ್ರಮಣಕಾರರ ಮೇಲೆ ಕೆಲವೊಂದು ಭೂ ಪ್ರದೇಶಗಳನ್ನು ಪ್ರವೇಶಿಸದಂತೆ ಬಹಿಷ್ಕಾರ ವಿಧಿಸಲಾಗುತ್ತಿತ್ತು. ತಮ್ಮ ಇತಿಹಾಸದ ಒಂದು ನಿರ್ದಿಷ್ಟ ಅವಧಿಯಲ್ಲಿ ವಸಾಹತುಶಾಹಿ ರಾಷ್ಟ್ರಗಳಲ್ಲಿ ಅದರಲ್ಲಿಯೂ ಇಂಗ್ಲೆಂಡ್ ಮತ್ತು ಫ್ರಾನ್ಸ್‍ಗಳಲ್ಲಿ ತಮ್ಮ ತಮ್ಮ ವಸಾಹತುಗಳಿಗೆ ಅಪರಾಧಿಗಳನ್ನು ವರ್ಗಾಯಿಸಿ ಬಿಡುವುದು ಸಾಮಾನ್ಯ ಪದ್ಧತಿಯಾಗಿಬಿಟ್ಟಿತ್ತು. ಇಂದಿಗೂ ಅನೇಕ ರಾಷ್ಟ್ರಗಳಲ್ಲಿ ಕೆಲವು ಬಗೆಯ ಅಪರಾಧಗಳನ್ನು ಎಸಗುವ ವಿದೇಶಿಯರನ್ನು ಗಡೀಪಾರು ಮಾಡುವುದು; ಸಮುದಾಯ ದೇಶ ಅಥವಾ ರಾಷ್ಟ್ರವನ್ನು ಬಿಟ್ಟು ಹೋಗುವಂತೆ ಅಲೆಮಾರಿಗಳಿಗೆ ಅಥವಾ ನಿಯಮೋಲ್ಲಂಘಕರಿಗೆ ಆದೇಶ ನೀಡುವುದು ಇವು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಕಾಣದೊರೆಯುತ್ತದೆ.

ದಂಡನಾತ್ಮಕ ಕ್ರಮವಾಗಿ ಅದರಲ್ಲಿಯೂ ತಿದ್ದುವ ಕ್ರಮವಾಗಿ, ಬಂಧನ ಶಿಕ್ಷೆಯನ್ನು ವಿಧಿಸುವುದು ಪ್ರಾಚೀನ ಕಾಲದಲ್ಲಿ ಅಷ್ಟೇ ಅಲ್ಲ, ಮಧ್ಯಯುಗದಲ್ಲಿಯೂ ಗೊತ್ತೇ ಇರಲಿಲ್ಲ. ಕೆಲವೊಂದು ಅಪವಾದಗಳನ್ನು ಬಿಟ್ಟರೆ, ತೌಲನಿಕವಾಗಿ, ಇದು ಅಪರಾಧಿಗಳೊಡನೆ ವ್ಯವಹರಿಸುವ ಆಧುನಿಕ ಕ್ರಮ. ಬಂಧನದ ಸಂದರ್ಭಗಳಲ್ಲಿ ಅದು ಶಿಕ್ಷೆಗೆ ಬದಲಾಗಿ ವಿಚಾರಣೆಗೆ ಮೊದಲಿನ ತಡೆ ಹಿಡಿದಿರುವಿಕೆ ಅಥವಾ ಸ್ಥಾನಬದ್ಧವಾಗಿಯೇ ಆಗಿರುತ್ತಿತ್ತು. ಸುಮಾರು 16 ನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ ಇಂಗ್ಲೆಂಡಿನಲ್ಲಿ ಹಾಗೂ ಇಡೀ ಖಂಡದಲ್ಲಿ ಬಂಧನಕ್ರಮ ವ್ಯಾಪಕವಾಗಿ ಜಾರಿಗೆ ಬಂತು. ಕಾಲಾನುಕ್ರಮದಲ್ಲಿ ಬಂಧನ ಹಾಗೂ ಸಕ್ರಮ ಶಿಕ್ಷೆಯನ್ನು ಅಪರಾಧಿಯನ್ನು ತಿದ್ದುವ ಒಂದು ವಿಧಾನವೆಂದು ಪರಿಗಣಿಸಲಾಯಿತು. 18 ನೆಯ ಶತಮಾನದ ಕೊನೆಯಲ್ಲಿ ಆರಂಭಗೊಂಡ ಈ ಉಪಕ್ರಮ 19 ನೆಯ ಶತಮಾನದ ಮೊದಲಲ್ಲಿ ಶಿಕ್ಷೆಯ ಪ್ರಮುಖ ವಿಧಾನವಾಗಿ ಪರಿಣಮಿಸಿತು. ಇದರ ಜೊತೆಗೆ ಅಪರಾಧದ ಬಗೆಗಿನ ಮತ್ತೊಂದು ಪ್ರತಿಕ್ರಿಯೆಯೂ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅಥವಾ ಆರ್ಥಿಕ ದಂಡವನ್ನು ವಿಧಿಸುವುದು ವಿಕಾಸಗೊಂಡಿತು. ಇದು ಬಂಧನದ ಕಲ್ಪನೆಗಿಂತ ತುಂಬ ಹಿಂದಿನ ಕಲ್ಪನೆಯೇ ಆಗಿದೆ. ಪ್ರಾಚೀನ ಕಾಲದಷ್ಟು ಹಿಂದಕ್ಕೆ ಹೋಗುವ ಈ ವಿಧಾನ ಪ್ರಾಚುರ್ಯವನ್ನು ಗಳಿಸಿದ್ದು 19ನೆಯ ಶತಮಾನದ ಕೊನೆಯ ಹೊತ್ತಿಗೆ ಮಾತ್ರ. ಈಗ ಇದು ಸಾಮಾಜಿಕ ಸಮುದಾಯಗಳಲ್ಲಿ ಅತ್ಯಂತ ವ್ಯಾಪಕವಾಗಿ ಬಳಸಲಾಗುತ್ತಿರುವ ವಿಧಾನವಾಗಿದೆ.

ಅತಿಕ್ರಮಣಿಗಳ ಬಗೆಗಿನ ದಂಡನಾತ್ಮಕ ಪ್ರತಿಕ್ರಿಯೆ, ಎಂದಿನಿಂದ ಅಲ್ಲದಿದ್ದರೂ ಸಾಕಷ್ಟು ಕಾಲದಿಂದ ಎಲ್ಲ ಸಂಸ್ಕøತ ಸಮುದಾಯಗಳಲ್ಲಿಯೂ ಸಾರ್ವತ್ರಿಕವಾಗಿ ಬಳಕೆಯಲ್ಲಿತ್ತು. ಬಹುತೇಕವಾಗಿ ಗ್ರಹಿಸಲಾಗಿರುವಂತೆ ಅದು ಮಾನವ ಸ್ವಭಾವದಲ್ಲಿ ಅಥವಾ ಪ್ರವೃತ್ತಿಯಲ್ಲಿ ಬೇರು ಬಿಟ್ಟಿಲ್ಲವೆಂಬುದನ್ನು ವೈe್ಞÁನಿಕವಾಗಿ ಅಧ್ಯಯನಗಳು ತೋರಿಸಿಕೊಟ್ಟಿವೆ. ಇದು ಸಾಂಸ್ಕøತಿಕವಾಗಿ ನಿರ್ಧಾರಿತವಾಗುವಂಥದು. ಸಾಮಾಜಿಕ ವ್ಯವಸ್ಥೆ ಹಾಗೂ ಸಾಂಸ್ಕøತಿಕ ಸ್ವರೂಪಕ್ಕನುಗುಣವಾಗಿ ಅಪರಾಧದ ಬಗೆಗಿನ ಪ್ರತಿಕ್ರಿಯೆ ದಂಡನಾತ್ಮಕವಾಗಿರಬಹುದು ಅಥವಾ ಆ ದಂಡನಾತ್ಮಕವಾಗಿರಬಹುದು. ಅಂತೆಯೇ ಸಮಾಜ ಮತ್ತು ಅದರ ಸಂಸ್ಕøತಿಗಳಿಗೆ ಅನುಗುಣವಾಗಿ ಆ ಪ್ರತಿಕ್ರಿಯೆಯನ್ನು ಜಾರಿಗೆ ಕೊಡುವ ನಿರ್ದಿಷ್ಟ ವಿಧಾನಗಳೂ ಬೇರೆಯಾಗಬಹುದು.
ಅಪರಾಧಿಗಳನ್ನು ತಿದ್ದುವ ಹಾಗೂ ಅಪರಾಧಗಳನ್ನು ಮೆಟ್ಟಿಹಾಕುವ ಪರಿಣಾಮಕಾರಿ ಕ್ರಮವಾಗಿ ದಂಡನೆಗೆ ಬಹು ದೀರ್ಘಕಾಲದಿಂದ ಮನ್ನಣೆ ದೊರೆತಿದೆಯೆಂಬುದು ಸ್ಪಷ್ಟವಾಗಿದೆಯಾದರೂ ವೈe್ಞÁನಿಕ ಅಧ್ಯಯನಗಳು ಈ ವಾದವನ್ನು ರುಜುವಾತುಪಡಿಸಿಲ್ಲ. ಅಷ್ಟೇ ಅಲ್ಲ, ಅದರ ಪರಿಣಾಮದ ಬಗ್ಗೆ ಈಗ ತುಂಬ ಸಂದೇಹವೇ ಉಂಟಾಗಿದೆ. ದಂಡನೆಗೆ - ಅದರಲ್ಲಿಯೂ ತತ್‍ಕ್ಷಣದಲ್ಲಿಯೇ ವಿಧಿಸಲಾಗುವ ಕೆಲವೊಂದು ದಂಡನೆಗಳಿಗೆ - ತಮ್ಮವೇ ಆದ ಒಂದು ಮೌಲ್ಯವಿದೆ ಎಂಬುದನ್ನು ಯಾರೂ ಪ್ರಶ್ನಿಸಿಲ್ಲವಾದರೂ ಅದರ ಮೌಲ್ಯ ತುಂಬ ಸೀಮಿತವಾಗಿವೆ. ಹಾಗೂ ಅದರ ಪರಿಣಾಮಗಳು ತುಂಬ ನಿರಾಶಾದಾಯಕವಾಗಿವೆ. ಮೊಂಡು ಅಪರಾಧಗಳ ಹಾಗೂ ಸಾಧಾರಣ ಪ್ರಮಾಣ ಬಹುಮಟ್ಟಿಗೆ ಹೆಚ್ಚುತ್ತಲೇ ಬಂದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಹೆಚ್ಚೆಂದರೆ, ಸಾಮಾನ್ಯವಾಗಿ ಕಾನೂನುಬದ್ಧವಾಗಿ ನಡೆದುಕೊಳ್ಳುವಂಥ ಪೌರರಲ್ಲಿ ಅಪರಾಧಕ್ಕೆ ಪ್ರೋತ್ಸಾಹಕರವಾಗಿರುವುದಿಲ್ಲವೆನ್ನುವಷ್ಟರ ಮಟ್ಟಿಗೆ ದಂಡನೆ ಸ್ವಲ್ಪ ಮಟ್ಟಿಗೆ ಪರಿಣಾಮಕಾರಿಯಾಗಿರಬಹುದು. ಅಪರಾಧಿಗಳು ಮತ್ತು ಭಾವಿ ಅಪರಾಧಿಗಳ ವಿಷಯದಲ್ಲಿ ಅದು ಬೀರಿರಬಹುದಾದ ಮುಖ್ಯ ಪ್ರಭಾವವೆಂದರೆ ಅವರು ಮತ್ತಷ್ಟು ಜಾಗೃತರೂ, ಬುದ್ಧಿವಂತರೂ ಆಗುವಂತೆ ಮಾಡಿರುವುದು ಹಾಗೂ ದಂಡನೆಯ ತೀವ್ರತೆ ಹೆಚ್ಚಾಗಿರುವಂಥ ಸಂದರ್ಭಗಳಲ್ಲಿ ಅಂಥ ಅಪರಾಧದ ಬಗೆಗಳನ್ನು ಬಿಟ್ಟು ಲಘುತರವಾದ ಶಿಕ್ಷೆ ಲಭ್ಯವಾಗುವಂಥ ಅಪರಾಧಗಳತ್ತ ಗಮನ ಹರಿಸುವಂತೆ ಮಾಡಿರುವುದು.

ಸದ್ಯಕ್ಕೆ ಅತ್ಯಂತ ಜನಪ್ರಿಯ ದಂಡನ ವಿಧಾನವಾಗಿರುವ ಸೆರೆವಾಸ ಅಪರಾಧಗಳನ್ನು ಕಾನೂನುಬದ್ಧ ಪೌರರನ್ನಾಗಿ ಮಾರ್ಪಡಿಸುವಲ್ಲಿ ಅಥವಾ ಅಪರಾಧಗಳನ್ನು ಹತ್ತಿಕ್ಕುವಲ್ಲಿ ವಿಶೇಷ ಸಾಧನೆಗಳನ್ನು ತನ್ನದಾಗಿಸಿಕೊಂಡಿದೆ ಎಂಬುದನ್ನು ಪ್ರಮಾಣಗಳನ್ನೇನೂ ಒದಗಿಸಿಲ್ಲ. ಅಲ್ಲದೇ ಸಾಮಾನ್ಯ ಅಪರಾಧಿ ತನ್ನ ಪ್ರವೃತ್ತಿಯನ್ನೇ ಸುಧಾರಿಸಿಕೊಳ್ಳುವುದಕ್ಕೆ ಬದಲಾಗಿ ಸೆರೆವಾಸದಅವಧಿಯಲ್ಲಿ ತನ್ನ ಅಪರಾಧ ಪ್ರವೃತ್ತಿಯನ್ನು ಮತ್ತಷ್ಟು ಕಠಿಣವಾಗಿಸಿಕೊಂಡು ಬಿಡುಗಡೆಯ ಬಳಿಕ ಮತ್ತೆ ಅಪರಾಧದ ಪ್ರಪಂಚಕ್ಕೆ ಹಿಂದಿರುಗುತ್ತಾನೆಂಬುದಕ್ಕೆ ಪ್ರಮಾಣಗಳಿವೆ. ಸಮಾಜದಿಂದ ಬೇರ್ಪಡಿಸಿದರೆ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನೂ ನಿರಾಕರಿಸಿದರೆ ಅಪರಾಧಿ ತನ್ನ ಕೃತ್ಯಗಳ ಬಗ್ಗೆ ಪಶ್ಚಾತ್ತಾಪ ಪಡುತ್ತಾನೆ ಹಾಗೂ ಕಾನೂನುಗಳನ್ನು ಗೌರವಿಸುವಂಥ ಪೌರನಾಗಿ ಪರಿಣಮಿಸುತ್ತಾನೆ ಎಂಬ ಜನಪ್ರಿಯ ಪರಿಕಲ್ಪನೆ ಅಂಕಿ-ಅಂಶಗಳಿಂದ ಯಾವುದೇ ಸಮರ್ಥನೆಯೂ ದೊರೆಯುವುದಿಲ್ಲ. ವ್ಯಕ್ತಿಗಳನ್ನು ಸಮಾಜದಿಂದ ಬೇರ್ಪಡಿಸಿ ಇಡುವ ಜೈಲುಗಳು ಅವರನ್ನು ಬಿಡುಗಡೆ ಮಾಡಿದ ಬಳಿಕ ಸಾಮಾನ್ಯ ಕಾನೂನುಬದ್ಧ ಜೀವನಕ್ಕೆ ಸಿದ್ಧಪಡಿಸುತ್ತವೆಂದು ನಿರೀಕ್ಷಿಸಲು ಸಾಧ್ಯವಿಲ್ಲವೆಂದು ಈ ಸಮಸ್ಯೆಯ ಬಗ್ಗೆ ಅಧ್ಯಯನ ನಡೆಸಿರುವ ವ್ಯಕ್ತಿಗಳೂ ತೋರಿಸಿಕೊಟ್ಟಿದ್ದಾರೆ.
ತಮ್ಮ ದಂಡನವ್ಯವಸ್ಥೆಗಳ ಈ ಗಂಭೀರವಾದ ಅರೆಕೊರೆಗಳ ಬಗ್ಗೆ ರಾಷ್ಟ್ರಗಳು ಹೆಚ್ಚುಹೆಚ್ಚಾಗಿ ಜಾಗೃತಗೊಳ್ಳುತ್ತದೆ. ಒಂದೆಡೆ ಅಪರಾಧಕ್ಕೆ ಇಂಬನ್ನೀಯುವಂತಿರುವ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳ ಬಗೆಗೂ ಅದರಲ್ಲಿಯೂ ಬಾಲಕರ ಸ್ತರದ ಬಗೆಗೂ ಇನ್ನೊಂದೆಡೆ ಕನಿಷ್ಠ ಪಕ್ಷ ಆಂಶಿಕವಾಗಿಯಾದರೂ ಅಪರಾಧ ಪ್ರವೃತ್ತಿಗೆ ಕಾರಣವಾಗುವ ವ್ಯಕ್ತಿಯ ಮಾನಸಿಕ ಅವ್ಯವಸ್ಥೆಗಳ ಬಗೆಗೂ ಈಗ ಹೆಚ್ಚು ಗಮನ ಕೊಡಲಾಗುತ್ತಿದೆ. ಆದ್ದರಿಂದ ಅಪರಾಧ ಮೂಲವಾಗಿರುವಂಥ ಪರಿಸ್ಥಿತಿಗಳನ್ನು ತೊಡೆದುಹಾಕಲು ಕ್ರಮಗಳನ್ನು ಕೈಗೊಳ್ಳಬೇಕೆಂದು ಯೋಜಿಸಲಾಗಿದೆ. ಅಥವಾ ಅಂಥ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಪರಾಧ ಸಂಭವದ ಪ್ರಮಾಣವನ್ನು ಕಡಿಮೆಯಾಗಿಸುತ್ತದೆಂಬ ನಿರೀಕ್ಷೆಯ ಮೇಲೆ ಹೀಗೆ ಮಾಡಲಾಗಿದೆ. ಅಂದರೆ ಅಪರಾಧ-ನಿವಾರಣೆಗೆ ವಿಶೇಷ ಪ್ರಾಧಾನ್ಯ ಕೊಡಲಾಗಿದೆ. ದಂಡನೆಗೆ ಬದಲಾಗಿ ವ್ಯಕ್ತಿಗಳ ಅಥವಾ ಸಮೂಹದ ಆಧಾರದ ಮೇಲೆ ಚಿಕಿತ್ಸೆಯ ಮೂಲಕ ಪುನರ್ವಸತಿ ವ್ಯವಸ್ಥೆ ಮಾಡುವತ್ತ ಗಮನ ಕೊಡಬೇಕೆಂದು ಹೇಳಲಾಗಿದೆ. ಅಂತೆಯೇ, ವ್ಯಕ್ತಿಯಿಂದ ವ್ಯಕ್ತಿಗೆ ಅಪರಾಧದ ಕಾರಣವೂ ಬೇರೆಯಾಗುತ್ತದೆ ಎಂಬುದನ್ನೂ ಗುರುತಿಸಲಾಗುತ್ತಿದೆ. ಆದ್ದರಿಂದ ಸಮಾನ ರೀತಿಯ ವ್ಯವಹರಣದ ಕಾರಣಕ್ಕಾಗಿ ಒಂದು ರೀತಿಯ ಅಪರಾಧಕ್ಕೆ ಒಂದೇ ರೀತಿಯ ಶಿಕ್ಷೆಯನ್ನು ಎಲ್ಲರಿಗೂ ವಿಧಿಸುವುದು ಅವಾಸ್ತವಿಕವಾಗುತ್ತದೆಂದು ಭಾವಿಸಲಾಗಿದೆ. ಚಿಕಿತ್ಸೆ ವ್ಯಕ್ತಿಗತ ಅಗತ್ಯಗಳಿಗೆ ಸಂವಾದಿಯಾಗಿರಬೇಕೇ ಹೊರತು ನ್ಯಾಯದ ಆಮೂರ್ತ ಭಾವನೆಗಳಿಗಲ್ಲ ಎಂದೂ ಹೇಳಲಾಗಿದೆ.

ದಂಡನೆಯ ಬಗೆಗಿನ ದೃಷ್ಡಿಕೋನದಲ್ಲಿನ ಈ ಬದಲಾವಣೆಗಳು (ಇದನ್ನು ನೂತನ ದಂಡನ ಶಾಸ್ತ್ರ ಎಂದು ಕರೆಯಲಾಗಿದೆ) ಜನಮಾನಸದಲ್ಲಿ ಇನ್ನೂ ಬೇರು ಬಿಟ್ಟಿಲ್ಲ. ಇಷ್ಟಾಗಿಯೂ ತೀವ್ರ ಶೈಕ್ಷಣಿಕ ಪ್ರಚಾರಗಳ ಬಳಿಕ ಶ್ರೀಸಾಮಾನ್ಯ ಇವುಗಳ ಅರ್ಥವನ್ನು ಅರಿಯತೊಡಗಿದ್ದಾನೆ. ಅಪರಾಧಿ ಮುಂದೊಡ್ಡುವ ಸಮಸ್ಯೆಗೆ ಪರಿಹಾರವನ್ನು ಅರಸುವ ಪ್ರಯತ್ನಕ್ಕೆ ಯಶಸ್ಸು ಖಂಡಿತವಾಗಿ ಲಭ್ಯ ವಾಗುತ್ತದೆಂದು ಇಂದು ಪ್ರಚುರಪಡಿಸಲಾಗುತ್ತಿರುವ ಹೊಸ ವಿಧಾನಗಳು ಯಾವುದೇ ಬಗೆಯಲ್ಲೂ ಭರವಸೆಯನ್ನೇನೂ ಕೊಡುವುದಿಲ್ಲ.

ಅಪರಾಧೀ ವರ್ತನೆಯ ಹಿಂದೆ ಅಡಗಿರುವ ಕಾರಣಗಳು ಯಾವುವು ಎಂಬುದು ಖಚಿತವಾಗಿ ತಿಳಿದುಬಂದಿಲ್ಲ. ಹೀಗಾಗಿ, ಅಪರಾಧಿಯನ್ನು ಗುಣಪಡಿಸಲು ಕೈಗೊಳ್ಳಬೇಕಾದ ಕ್ರಮಗಳನ್ನೂ ಖಚಿತವಾಗಿ ತಿಳಿಸಲು ಸಾಧ್ಯವಿಲ್ಲ. ನಿಶ್ಚಿತತೆಯನ್ನು ಸಾಧಿಸುವುದಕ್ಕೆ ಮೊದಲು ಇನ್ನೂ ಅನೇಕ ಸಂಗತಿಗಳನ್ನು ಕಂಡುಕೊಳ್ಳಬೇಕಾಗಿದೆ. ಇಷ್ಟಾಗಿಯೂ ಹಿಂದೆ ಕೈಗೊಂಡ ಕ್ರಮಗಳು ಪರಿಣಾಮಶೂನ್ಯವಾಗಿದ್ದುವು ಎಂಬ ಬಗ್ಗೆಯಾಗಲಿ, ವೈe್ಞÁನಿಕ ಪರಿಶೋಧಕರು ಪ್ರಚುರಪಡಿಸುತ್ತಿರುವ ಹೊಸ ಕ್ರಮಗಳು ಉತ್ತಮ ಪರಿಣಾಮಗಳನ್ನು ತಂದುಕೊಡುವ ಭರವಸೆಯನ್ನು ತೋರುತ್ತಿವೆ ಎಂಬ ಬಗ್ಗೆಯಾಗಲಿ ಸಂದೇಹವೇನೂ ಇಲ್ಲ. 
(ನೋಡಿ- ಅಪರಾಧಮನಶ್ಯಾಸ್ತ್ರ)						
(ಎಸ್.ಕೆ.; ಎಚ್.ವಿ.ಎನ್.; ಎಚ್.ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ